"ಮಕ್ಕಳೇನು ಸಣ್ಣವರಲ್ಲ" ಎನ್ನುವ ಗುಂಡುರಾವ್ ದೇಸಾಯಿಯವರು..... ಪುಸ್ತಕ ಪರಿಚಯ - makkalenu sannavaralla - pustaka parichaya - by venkatesh chagi
"ಮಕ್ಕಳೇನು ಸಣ್ಣವರಲ್ಲ" ಎನ್ನುವ ಗುಂಡುರಾವ್ ದೇಸಾಯಿಯವರು..... ( ಪುಸ್ತಕ ಪರಿಚಯ ) ಇತ್ತೀಚಿನ ದಿನಗಳಲ್ಲಿ ಹಾಸ್ಯರಸವನ್ನು ಹೊಂದಿರುವ ಮಕ್ಕಳ ಕಥೆಗಳನ್ನು ಬರೆಯುವ ಕವಿಗಳ ಸಂಖ್ಯೆ ತೀರ ವಿರಳವಾಗಿದೆ. ಆದರೂ ಬಿಸಿಲು ನಾಡಿನ 'ಕ್ರಿಯಾಶೀಲ ಮಕ್ಕಳ ಕವಿ' ಎಂದೇ ಗುರ್ತಿಸಿಕೊಂಡಿರುವ ರಾಯಚೂರು ಜಿಲ್ಲೆಯ ಮಸ್ಕಿಯ ಶ್ರೀಯುತ ಗುಂಡೂರಾವ್ ದೇಸಾಯಿ ಅವರನ್ನು ಈ ಸಂದರ್ಭದಲ್ಲಿ ಗುರುತಿಸಬಹುದಾಗಿದೆ. ಇತ್ತೀಚೆಗೆ ಅವರು ಹೊರ ತಂದಿರುವ 'ಮಕ್ಕಳೇನು ಸಣ್ಣವರಲ್ಲ' ಮಕ್ಕಳ ಕಥಾ ಸಂಕಲನವು ಈ ಕೊರತೆಯನ್ನು ನೀಗಿಸುವುದರಲ್ಲಿ ಸಂಶಯವಿಲ್ಲ . ಕೀರ್ತಿ ಪ್ರಕಾಶನದ ಅಡಿಯಲ್ಲಿ ಪ್ರಕಟಿಸಿರುವ ಈ ಪುಸ್ತಕವು ಮಕ್ಕಳಿಗೆ ಹಾಗೂ ಎಲ್ಲಾ ವಯೋಮಾನದ ಓದುಗರಿಗೆ ಹೊಸ ಅನುಭವವನ್ನು ನೀಡುವುದರಲ್ಲಿ ಸಂದೇಹವಿಲ್ಲ . "ಮಕ್ಕಳೇನು ಸಣ್ಣವರಲ್ಲ" ಎಂದು ಕಥಾಸಂಕಲದ ಶೀರ್ಷಿಕೆಯೇ ಹೇಳುವಂತೆ ನೈಜ ಘಟನೆಗಳಿಗೆ ತಾಳೆಯಾಗುವ, ಅನುಭವಕ್ಕೆ ಬಂದಿರುವ ಸಂದರ್ಭಗಳೇ ಕತೆಗಳಾಗಿ ರೂಪಗೊಂಡಿವೆ ಎಂದು ಭಾವಿಸಬಹುದು. ಮಕ್ಕಳ ತುಂಟಾಟ , ಹೊಸತನದ ತುಡಿತ , ಮೊಂಡುತನ, ಕುತೂಹಲ , ಜಾಣತನ ಹೀಗೆ ವಾಸ್ತವಿಕ ಅಂಶಗಳನ್ನು ಒಳಗೊಂಡ ಕಥಾ ಹಂದರವೇ "ಮಕ್ಕಳೇನು ಸಣ್ಣವರಲ್ಲ". ಮಕ್ಕಳು ಸಣ್ಣವರು , ಅವರಿಗೆ ಏನು ಗೊತ್ತಾಗುವುದಿಲ್ಲ , ಅವರಿಗೆ ತಿಳಿ ಹೇಳಬೇಕು , ಬುದ್ಧಿ ಕಡಿಮೆ ಎನ್ನುವ ಮಾತುಗಳಿಗೆ ವಿರೋಧ ಎನ್ನುವಂತಿವೆ ಈ ಕಥೆಗಳು. ವಾಸ್ತವದಲ್ಲಿ...