"ಮಕ್ಕಳೇನು ಸಣ್ಣವರಲ್ಲ" ಎನ್ನುವ ಗುಂಡುರಾವ್ ದೇಸಾಯಿಯವರು..... ಪುಸ್ತಕ ಪರಿಚಯ - makkalenu sannavaralla - pustaka parichaya - by venkatesh chagi
"ಮಕ್ಕಳೇನು ಸಣ್ಣವರಲ್ಲ" ಎನ್ನುವ ಗುಂಡುರಾವ್ ದೇಸಾಯಿಯವರು.....
( ಪುಸ್ತಕ ಪರಿಚಯ )
"ಮಕ್ಕಳೇನು ಸಣ್ಣವರಲ್ಲ" ಎಂದು ಕಥಾಸಂಕಲದ ಶೀರ್ಷಿಕೆಯೇ ಹೇಳುವಂತೆ ನೈಜ ಘಟನೆಗಳಿಗೆ ತಾಳೆಯಾಗುವ, ಅನುಭವಕ್ಕೆ ಬಂದಿರುವ ಸಂದರ್ಭಗಳೇ ಕತೆಗಳಾಗಿ ರೂಪಗೊಂಡಿವೆ ಎಂದು ಭಾವಿಸಬಹುದು. ಮಕ್ಕಳ ತುಂಟಾಟ , ಹೊಸತನದ ತುಡಿತ , ಮೊಂಡುತನ, ಕುತೂಹಲ , ಜಾಣತನ ಹೀಗೆ ವಾಸ್ತವಿಕ ಅಂಶಗಳನ್ನು ಒಳಗೊಂಡ ಕಥಾ ಹಂದರವೇ "ಮಕ್ಕಳೇನು ಸಣ್ಣವರಲ್ಲ". ಮಕ್ಕಳು ಸಣ್ಣವರು , ಅವರಿಗೆ ಏನು ಗೊತ್ತಾಗುವುದಿಲ್ಲ , ಅವರಿಗೆ ತಿಳಿ ಹೇಳಬೇಕು , ಬುದ್ಧಿ ಕಡಿಮೆ ಎನ್ನುವ ಮಾತುಗಳಿಗೆ ವಿರೋಧ ಎನ್ನುವಂತಿವೆ ಈ ಕಥೆಗಳು. ವಾಸ್ತವದಲ್ಲಿ ಈಗಿನ ಮಕ್ಕಳೇನು ಸಣ್ಣವರಲ್ಲ . ಹಿರಿಯರಿಗೆ ಬುದ್ಧಿ ಹೇಳುವ , ಅವರ ಸರಿ ತಪ್ಪುಗಳನ್ನು ಗುರುತಿಸಿ ಹೇಳುವ ಗುಣ ಇಂದಿನ ಮಕ್ಕಳಲ್ಲಿದೆ .
ಶ್ರೀ ಗುಂಡೂರಾವ್ ದೇಸಾಯಿಯವರ "ಮಕ್ಕಳೇನು ಸಣ್ಣವರಲ್ಲ" ಕಥಾಸಂಕಲನದಲ್ಲಿ ಒಟ್ಟು 12 ಸುಂದರ ಕಥೆಗಳಿವೆ. ಉತ್ತರ ಕರ್ನಾಟಕದ ಅದರಲ್ಲೂ ರಾಯಚೂರು ಭಾಗದ ಭಾಷಾ ಬಳಕೆಯು ಓದುಗರಿಗೆ ಕಟುಕುಳಿ ನೀಡುತ್ತವೆ. ಸಹಜವಾಗಿ ಮೂಡಿಬಂದಿರುವ ಕಥೆಗಳು ಎಂತಹ ಓದುಗನನ್ನೂ ನಗೆಗಡಲಲ್ಲಿ ತೇಲಿಸುತ್ತವೆ. ಕೆಲವರಿಗಂತು ತಮ್ಮ ಬದುಕಿನಲ್ಲಾದ ಘಟನೆಗಳನ್ನೇ ನೆನಪಿಸಬಹುದಾದ ಪ್ರಸಂಗಗಳನ್ನು ಹೊಂದಿವೆ. ಲೇಖಕರು ಕಥೆಗಳಿಗೆ ನೀಡಿದ ಶೀರ್ಷಿಕೆಗಳೇ ವಿಶಿಷ್ಟವಾಗಿವೆ. ಶೀರ್ಷಿಕೆಗೆ ತಕ್ಕಹಾಗೆ ಕಥೆಯು ಕುತೂಹಲವನ್ನು ಮೂಡಿಸುತ್ತಾ ಸಾಗುತ್ತದೆ . ಕಥೆಯ ನಿರೂಪಣೆಯಲ್ಲಿ ಕವಿಗಳ ಪ್ರೌಢಮೆಯನ್ನು ಕಾಣಬಹುದು . ಇಲ್ಲಿನ ಕಥೆಗಳು ಕೇವಲ ಕಥೆಗಳಾಗದೆ ಪ್ರತಿಯೊಂದು ಕಥೆಯೂ ಪ್ರತಿಯೊಬ್ಬರಿಗೂ ಯಾವುದೋ ಒಂದು ರೀತಿಯಲ್ಲಿ ನೈತಿಕತೆಯನ್ನು ಮೂಡಿಸುತ್ತದೆ. ಮಕ್ಕಳಿಗಂತೂ ತುಂಬಾ ಇಷ್ಟವಾಗುತ್ತವೆ. ಪ್ರಸಿದ್ಧ ಮಕ್ಕಳ ಸಾಹಿತಿಗಳಾದ ಆನಂದ ಪಾಟೀಲರು ಮುನ್ನುಡಿ ಯನ್ನು ಬರೆದಿದ್ದಾರೆ. ಮತ್ತೊರ್ವ ಮಕ್ಕಳ ಸಾಹಿತಿಗಳಾದ ತಮ್ಮಣ್ಣ ಬೀಗಾರ ರವರ ಬೆನ್ನುಡಿ ಈ ಪುಸ್ತಕಕ್ಕಿದೆ.
ಮೊದಲ ಕಥೆ "ಎಗ್ ರೈಸ್ ಮಂತ್ರಿ" ಯಲ್ಲಿ ಪ್ರಸ್ತುತ ಕಾಲಮಾನದ ಎಲೆಕ್ಷನ್ ಹಿನ್ನೆಲೆಯಲ್ಲಿ ನಡೆಯುವ ಚಟುವಟಿಕೆಗಳ ಪ್ರತಿರೂಪವೆನ್ನುವಂತೆ , ಆಸೆ ಆಮಿಷಗಳ ಪರಿಣಾಮ ಆಯ್ಕೆಯಾಗುವ ಪ್ರತಿನಿಧಿ , ಆದರೆ ನೀಡಿದ ಭರವಸೆ ಸುಳ್ಳಾದಾಗ ಮತ ನೀಡಿದ ಮಕ್ಕಳಿಂದ ನಿರಾಶೆಯ ಮಾತುಗಳು. ಕಥೆಯ ಕೊನೆಯಲ್ಲಿ 'ನಾಗ'ನ ಪಲಾಯನವಾದ ತುಂಬಾ ಸುಂದರವಾಗಿ ಮೂಡಿ ಬಂದಿದೆ. ಮಕ್ಕಳ ಶಿಕ್ಷಕರ ನಡುವೆ ನಡೆಯುವ ಸರಳ ಸಂಭಾಷಣೆ ನಗೆ ಮೂಡಿಸದೇ ಇರದು. ಈ ಕಥೆಯಲ್ಲಿ ಮಕ್ಕಳಿಗೆ ಪ್ರಜಾಪ್ರಭುತ್ವದ ತಿಳುವಳಿಕೆಯ ಜೊತೆಗೆ ಪೊಳ್ಳು ಭರವಸೆ ನೀಡುವ ನಾಯಕರ ಆಯ್ಕೆ ಸಮಾಜಕ್ಕೆ ಎಷ್ಟು ಮಾರಕ ಎಂಬುದನ್ನು ತುಂಬಾ ಮಾರ್ಮಿಕವಾಗಿ ತಿಳಿಸಲಾಗಿದೆ.
ಇನ್ನು ಎರಡನೇ ಕತೆ 'ಮಗ ಮತ್ತು ಗಾಳಿಪಟ'ದಲ್ಲಿ ತಂದೆ ಹಾಗೂ ಮಗನ ಗಾಳಿಪಟದ ತಯಾರಿ , ಹಾಗೂ ಅದನ್ನು ಮುಗಿಲೆತ್ತರ ಹಾರಿಸುವ ಮಗನ ಕಾತರತೆ, ಹಲವಾರು ಪ್ರಯತ್ನಗಳು ಹಾಗೂ ಮನೆಯವರಿಗೆ ಉಂಟಾಗುವ ತೊಂದರೆಗಳು, ಯೂಟ್ಯೂಬ್ ಬಳಕೆ ಮಾಡಿ ಗಾಳಿಪಟ ತಯಾರಿಸುವುದು . ಕೊನೆಗೆ ಗಾಳಿಪಟ ಆಗಸದ ಎತ್ತರಕ್ಕೆ ಹಾರಿದಾಗ ಮಗನ ಸಂತೋಷ . ಇದನ್ನು ನೋಡಿದ ಮನೆಯವರ ಸಂಭ್ರಮ , ಎಲ್ಲವೂ ಚಂದವಾಗಿ ಕಾಣುತ್ತದೆ .
ಮೂರನೇ ಕಥೆ 'ಮಕ್ಕಳೇನು ಸಣ್ಣವರಲ್ಲ '. ಈ ಕಥೆಯಲ್ಲಿ ಮಕ್ಕಳಲ್ಲಿ ಪಾರಿವಾಳ ಸಾಕುವಂಥ ಯೋಚನೆ, ಪಾರಿವಾಳಗಳನ್ನು ಇಟ್ಟುಕೊಂಡು ನಡೆಯುವ ಸ್ಪರ್ಧೆಗಳು, ಚೂಜಾಟ ನಡೆಯುವ ಪರಿ , ಕೊನೆಯಲ್ಲಿ ಮಕ್ಕಳ ಮನಸ್ಸನ್ನು ಪರಿವರ್ತಿಸುವ ಶಿಕ್ಷಕರು .. ಪಾರಿವಾಳ ಸಾಕಾಣಿಕೆಯನ್ನು ಒಂದು ಹವ್ಯಾಸವನ್ನಾಗಿಸುವ ಪರಿ ಸುಂದರವಾಗಿದೆ. ನಾಲ್ಕನೇ ಕತೆ "ನಾಯಿಯೊಂದಿಗೆ ಸಖ್ಯ" ಈ ಕಥೆಯಲ್ಲಿ ಮಕ್ಕಳು ಮತ್ತು ನಾಯಿಯೊಂದಿಗಿನ ಮಾನಸಿಕ ಬಂಧ, ಮಕ್ಕಳು ನಾಯಿಯನ್ನು ಎಷ್ಟು ಇಷ್ಟ ಪಡುತ್ತಾರೆ ಎಂಬುದನ್ನು ತೋರಿಸುತ್ತಾ ನಾಯಿಯಿಂದ ದೊಡ್ಡ ರಾದ್ಧಾಂತ ಆಗಬಹುದೆಂಬ ದೊಡ್ಡವರ ಭಯ , ಕೊನೆಗೆ ನಾಯಿಯ ಮುಗ್ಧತೆ ಮಕ್ಕಳ ಹಾಗೂ ಮನೆಯವರ ಮನಸ್ಸನ್ನು ಗೆಲ್ಲುವ ಪರಿಯನ್ನು ಸುಂದರವಾಗಿ ಕಟ್ಟಲಾಗಿದೆ.
ಐದನೆಯ ಕಥೆ "ಪವಾಡ" . ಇದರಲ್ಲಿ ನಿರಂತರ ಗೈರು ಹಾಜರಾಗುವ ಹುಡುಗನ ಲೋಕಜ್ಞಾನದ ಪರಿಯನ್ನ ಗಂಭೀರವಾಗಿ ತಿಳಿಸಲಾಗಿದೆ. " ಓದಾಕ ಮನಸ್ಸಿಲ್ಲ " ಎಂದೇ ಅವನು ತನ್ನ ಮನದಾಳದ ಮಾತನ್ನು ತಿಳಿಸುವ ಪರಿ ಮಗುವಿನ ಮುಗ್ದತೆ, ಹಾಗೆಯೇ ಹಳ್ಳಿಗಾಡಿನ ವಾಸ್ತವ ಚಿತ್ರಣ ಕಣ್ಣೆದುರು ಮೂಡುತ್ತದೆ . ಇನ್ನು "ಚಿರತೆ ಮತ್ತು ಸ್ನಾಕ್ಸ್ " ಎಂಬ ಕತೆಯಲ್ಲಿ ಮಕ್ಕಳು ಊರ ಹೊರಗೆ ಚಾರಣಕ್ಕೆಂದು ಹೋಗಿ ಚಿರತೆ ಕೈಯಲ್ಲಿ ಸಿಕ್ಕಿಹಾಕಿಕೊಂಡಾಗ , ಮಕ್ಕಳು ತಮ್ಮ ಬಳಿ ಇದ್ದ ಚಿಪ್ಸ್ , ಕುರುಕುರೆ, ಚಾಕಲೇಟ್ ತಿಂಡಿಗಳನ್ನು ಬಳಸಿ ಚಿರತೆಯಿಂದ ತಪ್ಪಿಸಿಕೊಂಡ ಪ್ರಸಂಗ ಗಂಭೀರತೆಯಲ್ಲೂ ನಗುತರಿಸುತ್ತದೆ.
ಏಳನೇ ಕಥೆ "ನಾನೇ ಫಸ್ಟ್ " .ಇದರಲ್ಲಿ ಪ್ರತಿ ಸಾರಿ ತರಗತಿಯಲ್ಲಿ ಮೊದಲ ಸ್ಥಾನದಲ್ಲಿ ಬರುವ ಸ್ಥಿತಿವಂತರ ಹುಡುಗನಿಗೆ ಪ್ರತಿಸ್ಪರ್ಧೆ ಎದುರಾದಾಗ ಮಾನಸಿಕವಾಗಿ ಕುಗ್ಗುವ ಸಂದರ್ಭ ಹಾಗೂ ಗುರುಗಳ ಜಾಣ್ಮೆಯಿಂದ ಹುಡುಗನ ಮನಸ್ಥಿತಿ ಬದಲಾಗುವ ಪರಿಯನ್ನು ಸುಂದರವಾಗಿ ಚಿತ್ರಿಸಲಾಗಿದೆ. ನಂತರ ಬರುವ ಐದು ಕಥೆಗಳಾದ "ಹೊಟ್ಟೆಯಲ್ಲಿ ಮರ" , "ಪ್ಲಾಸ್ಟಿಕ್ ಕಾಯಣ" , " ರಾಮುವಿನ ನಾಯಿ" , " ನಾನು ನೀರಿನ ಮೇಲೆ ನಡೆಯುವೆ " , " ದೆವ್ವ ಬಂದು ದೆವ್ವ " ಕಥೆಗಳು ಸರಳವಾದ ನಿಜ ಜೀವನದಲ್ಲಿ ನಡೆಯುವ ಸರಳ ಘಟನೆಗಳನ್ನು ತುಂಬಾ ಜಾಣ್ಮೆಯಿಂದ ಹಾಸ್ಯದ ರಂಗನಲ್ಲಿ ಅದ್ದಿ ನಿರೂಪಿಸಲಾಗಿದೆ. "ಪ್ಲಾಸ್ಟಿಕಾಯಣ"ದಲ್ಲಿ ಪ್ಲಾಸ್ಟಿಕ್ ಪಿಡುಗಿನ ವಿರುದ್ಧ ಹೋರಾಟ, "ನಾನು ನೀರಿನ ಮೇಲೆ ನಡೆಯುವೆ" ಕಥೆಯಲ್ಲಿ ಮೃತ ಸಮುದ್ರದ ಮೇಲೆ ನಡೆಯುವ ಗುರಿಯೊಂದಿಗೆ ಚೆನ್ನಾಗಿ ಓದುವ, ಒಳ್ಳೆಯ ಹುದ್ದೆ ಪಡೆಯುವ ಸದುದ್ದೇಶ. ಹೀಗೆ ಪ್ರತಿ ಕಥೆಗಳಲ್ಲಿ ವಾಸ್ತವದ ತಂಗಾಳಿ ಸುಳಿದಿದೆ.
ಈ ಕಥಾಸಂಕಲನದ ಕಥೆಗಳು ನವಿರಾದ ಹಾಸ್ಯ , ಮನರಂಜನೆ, ವಾಸ್ತವಿಕತೆ , ಮುಗ್ದತೆ ಎಲ್ಲವನ್ನೂ ಒಳಗೊಂಡು ಸಮಾಜದ ವಾಸ್ತವಿಕ ಚಿತ್ರಣಗಳೊಂದಿಗೆ ಕೊನೆಯಲ್ಲಿ ಒಂದು ಸುಂದರವಾದ ಸಂದೇಶವನ್ನು ನೀಡುತ್ತವೆ. ಗುಂಡುರಾವ್ ದೇಸಾಯಿಯವರು ಬರುವ ದಿನಗಳಲ್ಲಿ ವಾಸ್ತವಿಕ ಮಕ್ಕಳ ಪ್ರಪಂಚವನ್ನು ತಿಳಿ ಹಾಸ್ಯದ ಮೂಲಕ ಮಕ್ಕಳ ಹಾಗೂ ಹಿರಿಯರ ಮನಸೂರೆಗೊಳ್ಳುವಂತಹ ಮಕ್ಕಳ ಕಥೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಲಿ ಎಂದು ಆಶಿಸುತ್ತೇವೆ. ಶುಭವಾಗಲಿ
=> ವೆಂಕಟೇಶ ಚಾಗಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ